ವೇತನ ಖಾತೆ ಪರಿವರ್ತನೆ, PMJJBY-PMSBY ವಿಮಾ ಯೋಜನೆಗಳು ಹಾಗೂ HRMS ESS ನೋಂದಣಿ: ಕಡ್ಡಾಯ ಮಾರ್ಗಸೂಚಿಗಳು
1. ವೇತನ ಖಾತೆ ಮಾರ್ಪಾಡು: ಎಲ್ಲಾ ಪ್ರಮುಖ ಬ್ಯಾಂಕ್‌ಗಳಲ್ಲಿ ಒದಗಿಸುತ್ತಿರುವ ವೇತನ ಖಾತೆಯ ಯೋಜನೆಯ ಲಾಭವನ್ನು ಪಡೆಯಲು ತಮ್ಮ ಬ್ಯಾಂಕ್ ಖಾತೆಯನ್ನು ವೇತನ ಖಾತೆ ಯೋಜನೆಯಡಿ ಮಾರ್ಪಡಿಸಲು ಈ ಮೂಲಕ ತಿಳಿಸಿದೆ.
2. ಪ್ರಧಾನ ಮಂತ್ರಿ ವಿಮಾ ಯೋಜನೆಗಳ ವಿವರ (FD-CAM/160/2023, ದಿನಾಂಕ: 06/09/2023)
ಆರ್ಥಿಕ ಇಲಾಖೆ ಪತ್ರ ಸಂಖ್ಯೆ FD-CAM/160/2023 ದಿನಾಂಕ: 06/09/2023 ರನ್ವಯ, ಪ್ರತಿ ಉದ್ಯೋಗಿಗಳಿಗೆ ಎರಡು ಅಮೂಲ್ಯವಾದ ವಿಮಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಯನ್ನು ತೆರೆಯಲು ಕೋರಲಾಗಿದೆ. ಈ ಯೋಜನೆಯನ್ನು ತಮ್ಮ ವೇತನ ಖಾತೆ ಬ್ಯಾಂಕ್ ಮುಖಾಂತರ ಪಡೆಯಬಹುದಾಗಿದೆ. ಇವೆರಡು ವಿಮಾ ಯೋಜನೆಗಳು ನೌಕರರ ಕುಟುಂಬಕ್ಕೆ ಬಹಳ ಉಪಯುಕ್ತವಾಗಿವೆ.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ)
ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ವಾರ್ಷಿಕ ರೂ. 436/- ಗಳ ಪ್ರೀಮಿಯಂ ಪಾವತಿಸುವುದು (ಪ್ರೀಮಿಯಂ ವಿಮಾದಾರರ ಬ್ಯಾಂಕ್ ಖಾತೆಯ ಮೂಲಕ ಪಾವತಿಸಲ್ಪಡುತ್ತದೆ). ಯಾವುದೇ ಕಾರಣದಿಂದ ಮರಣ ಸಂಭವಿಸಿದರೆ ಅವಲಂಬಿತ ಕುಟುಂಬ ಸದಸ್ಯರಿಗೆ ರೂ. 2.00 ಲಕ್ಷಗಳ ವಿಮಾ ಮೊತ್ತದ ನೆರವು ದೊರೆಯುತ್ತದೆ. ಈ ಯೋಜನೆಯು 18 ರಿಂದ 50 ವರ್ಷದೊಳಗಿನ ಜನರಿಗೆ ಮಾತ್ರ ಲಭ್ಯವಿರುತ್ತದೆ.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ)
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ) ಇದು ಅಪಘಾತ ವಿಮಾ ಯೋಜನೆಯಾಗಿದ್ದು, ವಾರ್ಷಿಕ ರೂ. 20/- ಗಳ ಪ್ರೀಮಿಯಂ ಪಾವತಿಸುವುದು (ಪ್ರೀಮಿಯಂ ವಿಮಾದಾರರ ಬ್ಯಾಂಕ್ ಖಾತೆಯ ಮೂಲಕ ಪಾವತಿಸಲ್ಪಡುತ್ತದೆ). ಒಂದು ವೇಳೆ ಅಪಘಾತವಾಗಿ ಮೃತಪಟ್ಟರೆ ಅಥವಾ ಶಾಶ್ವತ ಒಟ್ಟು ಅಂಗವೈಕಲ್ಯಕ್ಕೆ ರೂ. 2.00 ಲಕ್ಷಗಳು ಹಾಗೂ ಶಾಶ್ವತ ಭಾಗಶಃ ಅಂಗವೈಕಲ್ಯಕ್ಕೆ ರೂ. 1.00 ಲಕ್ಷಗಳ ವಿಮಾ ಮೊತ್ತದ ನೆರವು ದೊರೆಯುತ್ತದೆ. ಈ ಯೋಜನೆಯು 18 ರಿಂದ 70 ವರ್ಷದೊಳಗಿನ ಜನರಿಗೆ ಮಾತ್ರ ಲಭ್ಯವಿರುತ್ತದೆ.
3. HRMS ESS ಪೋರ್ಟಲ್‌ನಲ್ಲಿ ದಾಖಲಾತಿ ಹಾಗೂ DDOಗಳ ಜವಾಬ್ದಾರಿಗಳು
- ವಿಮಾ ವಿವರಗಳ ನವೀಕರಣ (ದಿನಾಂಕ: 02/11/2023 ರ ಪತ್ರದಂತೆ): ಆರ್ಥಿಕ ಇಲಾಖೆ ಪತ್ರ ಸಂಖ್ಯೆ: FD-CAM/160/2023 ದಿನಾಂಕ: 02/11/2023 ರನ್ವಯ, ಪಿಎಂಜೆಜೆಬಿವೈ ಮತ್ತು ಪಿಎಂಎಸ್‌ಬಿವೈ ವಿಮಾ ವಿವರಗಳನ್ನು ಹೆಚ್‌ಆರ್‌ಎಂಎಸ್ ಇಎಸ್‌ಎಸ್ ಲಾಗಿನ್ ಪೋರ್ಟಲ್‌ನಲ್ಲಿ ದಾಖಲಿಸಲು ಸೂಚಿಸಲಾಗಿದೆ. ಅದರಂತೆ ಪ್ರತಿ ಸಿಬ್ಬಂದಿಗಳು ಹಾಗೂ ಡಿಡಿಓಗಳು ಈ ಯೋಜನೆಯನ್ನು ಖಚಿತವಾಗಿ ಪಡೆದುಕೊಳ್ಳುವುದು ಹಾಗು ಇಎಸ್‌ಎಸ್ ಪೋರ್ಟಲ್‌ನಲ್ಲಿ ಈ ದಾಖಲೆಯನ್ನು ನವೀಕರಿಸುವುದು ಅವರ ಜವಾಬ್ದಾರಿಯಾಗಿರುತ್ತದೆ. ಸದರಿ ಪ್ರಗತಿಯನ್ನು ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆಯವರು ವೀಕ್ಷಿಸುತ್ತಿರುತ್ತಾರೆ.
- ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS): ದಯವಿಟ್ಟು ತಮ್ಮ ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಫಲಾನುಭವಿಗಳನ್ನು ಅಪ್‌ಡೇಟ್ ಮಾಡಿದ್ದಲ್ಲಿ ಮಾತ್ರ ಯೋಜನೆಯ ಸದುಪಯೋಗವನ್ನು ಸಿಬ್ಬಂದಿಗಳು ಹಾಗೂ ಅವರ ಕುಟುಂಬವು ಪಡೆಯಬಹುದು.
- ESS ನೋಂದಣಿ ಕಡ್ಡಾಯ: ಎಲ್ಲಾ ಉದ್ಯೋಗಿಗಳು ESS ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು, ತಮ್ಮದೇ ಆದ ಪಾವತಿ ಚೀಟಿ (Payslip), ರಜೆ ವಿವರಗಳು ಮತ್ತು ಕಡಿತದ ಸಾರಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಸೌಲಭ್ಯವನ್ನು ಪಡೆಯುತ್ತಿರುವ ಬಗ್ಗೆ ಡಿಡಿಓರವರು ಖಚಿತಪಡಿಸಿಕೊಳ್ಳಬೇಕು. ತಮ್ಮ ಎಲ್ಲಾ ಉದ್ಯೋಗಿಗಳು 1ನೇ ಜನವರಿ 2024 ರ ಮೊದಲು ಈ ಪೋರ್ಟಲ್‌ನಲ್ಲಿ ನೋಂದಾಯಿಸಲು ಅನುವು ಮಾಡಿಕೊಡುವ ಜವಾಬ್ದಾರಿ ಡಿಡಿಓರವರದಾಗಿರುತ್ತದೆ.
📌 ಗಮನಿಸಿ: ಎಲ್ಲಾ ಸರ್ಕಾರಿ ನೌಕರರು ತಕ್ಷಣವೇ ತಮ್ಮ ಬ್ಯಾಂಕ್ ಖಾತೆಯನ್ನು ವೇತನ ಖಾತೆಯಾಗಿ ಪರಿವರ್ತಿಸಿ, PMJJBY ಮತ್ತು PMSBY ಯೋಜನೆಗಳನ್ನು ನೋಂದಾಯಿಸಿಕೊಂಡು, ಹೆಚ್‌ಆರ್‌ಎಂಎಸ್ ಇಎಸ್‌ಎಸ್ ತಂತ್ರಾಂಶದಲ್ಲಿ ನಿಗದಿತ ಅವಧಿಯೊಳಗೆ ವಿವರಗಳನ್ನು ನವೀಕರಿಸಲು ಕೋರಲಾಗಿದೆ.
No comments:
Post a Comment