ಸರ್ಕಾರಿ ಬಸ್‌ಗಳು ಹಾಗೂ ನಿಲ್ದಾಣಗಳಲ್ಲಿ ತಂಬಾಕು ಜಾಹೀರಾತು ಪ್ರದರ್ಶನ ಸಂಪೂರ್ಣ ನಿಷೇಧ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆದೇಶ
ಬೆಂಗಳೂರು: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ನೇರ ಅಥವಾ ಪರೋಕ್ಷ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.
ಸಾರಿಗೆ ಸಚಿವರು ಇಂದು (ಜನವರಿ 30, 2026) ಈ ಕುರಿತು ಅಧಿಕೃತ ಟಿಪ್ಪಣಿ ಹೊರಡಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹಾಗೂ ತಂಬಾಕು ಸೇವನೆಯನ್ನು ಪ್ರೋತ್ಸಾಹಿಸುವ ಎಲ್ಲಾ ಪ್ರವೃತ್ತಿಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಸಚಿವರ ಅಧಿಕೃತ ಟಿಪ್ಪಣಿಯ ಪ್ರಮುಖ ಅಂಶಗಳು
- ತಕ್ಷಣದ ನಿಷೇಧ: ಇನ್ಮುಂದೆ ಯಾವುದೇ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಅಥವಾ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಗೆ ಪ್ರಚೋದನೆ ನೀಡುವ ಯಾವುದೇ ರೀತಿಯ ಜಾಹೀರಾತುಗಳನ್ನು ಪ್ರಚಾರ ಮಾಡುವಂತಿಲ್ಲ.
- ತೆರವಿಗೆ ಸೂಚನೆ: ಈಗಾಗಲೇ ಬಸ್‌ಗಳಲ್ಲಿ ಅಥವಾ ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ ತಂಬಾಕು ಜಾಹೀರಾತುಗಳನ್ನು ತಕ್ಷಣವೇ ತೆರವುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
- ಗಡುವು ನಿಗದಿ: ಈ ರೀತಿಯ ಹಳೆಯ ಜಾಹೀರಾತುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ನಿರ್ದಿಷ್ಟ ಕಾಲಮಿತಿಯನ್ನು ನಿಗದಿಪಡಿಸುವಂತೆ ಹಾಗೂ ಆ ನಿಗದಿತ ಅವಧಿಯೊಳಗೆ ತೆರವು ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಲಾಗಿದೆ.
ಯಾವೆಲ್ಲಾ ನಿಗಮಗಳಿಗೆ ಅನ್ವಯ?: ಈ ಆದೇಶವು ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ (BMTC), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ ತಕ್ಷಣದಿಂದಲೇ ಅನ್ವಯವಾಗಲಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ತಂಬಾಕು ಸೇವನೆಯನ್ನು ಉತ್ತೇಜಿಸುವ ಪ್ರವೃತ್ತಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರ್ಕಾರದ ಈ ನಿರ್ಧಾರವು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.
No comments:
Post a Comment