ಬೆಂಗಳೂರು: ಗ್ರಾಮೀಣ ಕರ್ನಾಟಕದ ಸಮಗ್ರ ಅಭಿವೃದ್ಧಿ, ಪಾರದರ್ಶಕತೆ ಹಾಗೂ ಜನಪರ ಆಡಳಿತಕ್ಕೆ ಸರ್ಕಾರ ಬದ್ಧವಾಗಿದ್ದು, ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಇ-ಸ್ವತ್ತು ಸರ್ವರ್ ಸಮಸ್ಯೆಯನ್ನು ತಕ್ಷಣವೇ ಪರಿಹರಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉನ್ನತಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಇಂದು ನಡೆಸಿದ ಪರಿಚಯಾತ್ಮಕ ಸಭೆಯಲ್ಲಿ ಇಲಾಖೆಯ ಹಲವು ಮಹತ್ವದ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿ, ಅಧಿಕಾರಿಗಳಿಗೆ ಹಲವು ಪ್ರಮುಖ ಸೂಚನೆಗಳನ್ನು ನೀಡಲಾಯಿತು.
ಕಲುಷಿತ ನೀರು ಸರಬರಾಜಿಗೆ ಬ್ರೇಕ್:
ಪ್ರಯೋಗಾಲಯಗಳಲ್ಲಿ ತಪಾಸಣೆ ಕಡ್ಡಾಯ "ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ಪಂಚಾಯ್ತಿಗಳ ಆದ್ಯ ಕರ್ತವ್ಯವಾಗಿದೆ. ಯಾವುದೇ ಕಾರಣಕ್ಕೂ ಕಲುಷಿತ ನೀರು ಸರಬರಾಜಾಗದಂತೆ ಕಟ್ಟೆಚ್ಚರ ವಹಿಸಬೇಕು."
ಕುಡಿಯುವ ನೀರಿನ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ಇನ್ನು ಮುಂದೆ NABL (ರಾಷ್ಟ್ರೀಯ ಮಾನ್ಯತೆ ಮಂಡಳಿ) ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ನಿಯಮಿತವಾಗಿ ನೀರಿನ ಗುಣಮಟ್ಟವನ್ನು ಪರೀಕ್ಷಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.
ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಮತ್ತು ಜಿಯೋ ಟ್ಯಾಗಿಂಗ್:
ರಾಜ್ಯದ ಎಲ್ಲ ಗ್ರಾಮೀಣ ಭಾಗಗಳಲ್ಲಿ ಸುರಕ್ಷಿತ ನೀರು, ಉತ್ತಮ ರಸ್ತೆ ಸಂಪರ್ಕ ಹಾಗೂ ಗುಣಮಟ್ಟದ ಮೂಲಸೌಕರ್ಯ ಒದಗಿಸಲು ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಸರ್ಕಾರಿ ಆಸ್ತಿಗಳ ಸಂರಕ್ಷಣೆಗಾಗಿ ಇಲಾಖೆಯಿಂದ ನಿರ್ಮಾಣಗೊಂಡಿರುವ ಎಲ್ಲ ಆಸ್ತಿಗಳನ್ನು ಜಿಯೋ ಟ್ಯಾಗ್ (Geo-Tag) ಮಾಡಿ ದಾಖಲೀಕರಣ ಮಾಡಲು ಸೂಚಿಸಲಾಗಿದೆ.
ಅಲ್ಲದೆ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆಯಡಿ ಕೈಗೊಂಡಿರುವ ಸಾಮಾಜಿಕ ಅರಣ್ಯೀಕರಣ ಕಾಮಗಾರಿಗಳಿಗೂ ಜಿಯೋ ಟ್ಯಾಗ್ ಮತ್ತು ಕಡ್ಡಾಯ ಆಡಿಟ್ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದನೆ
ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿರುವ ಇ-ಸ್ವತ್ತು ಸಂಬಂಧಿತ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಕ್ಷಣವೇ ಪರಿಹರಿಸಿ, ಸುಗಮ ಸೇವೆಗೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಗ್ರಾಮೀಣ ಭಾಗದ ಅಭಿವೃದ್ಧಿಯಲ್ಲಿ ಯಾವುದೇ ರೀತಿಯ ಗುಣಮಟ್ಟದ ರಾಜಿ ಇಲ್ಲದೆ ಪಾರದರ್ಶಕ ಆಡಳಿತ ನೀಡಲು ಇಲಾಖೆ ಸಂಪೂರ್ಣವಾಗಿ ಸಜ್ಜಾಗಿದೆ.
No comments:
Post a Comment