ಬೆಂಗಳೂರು: ಸೆಪ್ಟೆಂಬರ್ 18, 2026
ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೊಳಪಡುವ ವಿವಿಧ ವೃಂದದ ಅಧಿಕಾರಿಗಳಿಗೆ ಜೇಷ್ಠತೆ ಹಾಗೂ ಅರ್ಹತೆಯ ಆಧಾರದ ಮೇಲೆ ಮುಂಬಡ್ತಿ ನೀಡಲು ಇದ್ದ ಹಳೆಯ ಸಮಿತಿಗಳನ್ನು ರದ್ದುಪಡಿಸಿ, ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿಗಳನ್ವಯ ಇಲಾಖಾ ಮುಂಬಡ್ತಿ ಸಮಿತಿಗಳನ್ನು (DPC) ಪುನರ್ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು 2026ರ ಜುಲೈ 8ರಂದು ಹೊರಡಿಸಿರುವ ಮಾರ್ಗಸೂಚಿಗಳ ಅನುಸಾರ ಈ ಸಮಿತಿಗಳನ್ನು ರಚಿಸಲಾಗಿದ್ದು, ಒಟ್ಟು 4 ವಿವಿಧ ಪದೋನ್ನತಿ ಸಮಿತಿಗಳನ್ನು ರೂಪಿಸಲಾಗಿದೆ.
ಸಮಿತಿಗಳ ವಿವರ:
- ಸಮಿತಿ - 1 (ಪೌರಾಯುಕ್ತರು - ಆಯ್ಕೆ ಶ್ರೇಣಿ ಮತ್ತು ಶ್ರೇಣಿ-1): ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಅಧ್ಯಕ್ಷರಾಗಿರಲಿದ್ದು, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಸದಸ್ಯರಾಗಿರಲಿದ್ದಾರೆ.
- ಸಮಿತಿ - 2 (ಕಾರ್ಯಪಾಲಕ ಅಭಿಯಂತರರು): ಪೌರಸೇವಾ ವೃಂದದ ಕಾರ್ಯಪಾಲಕ ಅಭಿಯಂತರ ಹುದ್ದೆಗಳ ಮುಂಬಡ್ತಿ ಪರಿಶೀಲನೆಗಾಗಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲಿದೆ.
- ಸಮಿತಿ - 3 (ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಪೌರಾಯುಕ್ತರು ಶ್ರೇಣಿ-2): ಸಿವಿಲ್, ಪರಿಸರ ಇಂಜಿನಿಯರ್ಗಳು ಹಾಗೂ ಶ್ರೇಣಿ-2 ಪೌರಾಯುಕ್ತರ ಮುಂಬಡ್ತಿಗಾಗಿ ರಚಿಸಲಾಗಿದ್ದು, ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಧಿಕಾರಿಗಳನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.
- ಸಮಿತಿ - 4 (ಮುಖ್ಯಾಧಿಕಾರಿಗಳು ಶ್ರೇಣಿ-1 ಮತ್ತು ಶ್ರೇಣಿ-2): ಮುಖ್ಯಾಧಿಕಾರಿ ಹುದ್ದೆಗಳ ಮುಂಬಡ್ತಿ ಅರ್ಹತೆ ನಿರ್ಧರಿಸಲು ಈ ಸಮಿತಿಯನ್ನು ರಚಿಸಲಾಗಿದ್ದು, ಇದರಲ್ಲೂ ಮೀಸಲಾತಿ ಪ್ರಾತಿನಿಧ್ಯದಡಿ ಎಸ್ಸಿ/ಎಸ್ಟಿ ಅಧಿಕಾರಿಗಳನ್ನು ಸದಸ್ಯರನ್ನಾಗಿ ಸೇರಿಸಲಾಗಿದೆ.
ಈ ಸಮಿತಿಗಳು ಜೇಷ್ಠತೆ ಮತ್ತು ಅರ್ಹತೆಯ ಆಧಾರದ ಮೇಲೆ ಮುಂಬಡ್ತಿ ವಲಯದಲ್ಲಿರುವ ಅಧಿಕಾರಿಗಳ ಸೂಕ್ತತೆಯನ್ನು ಪರಿಶೀಲಿಸಿ ನೇಮಕಾತಿ ಪ್ರಾಧಿಕಾರಕ್ಕೆ ತಮ್ಮ ಶಿಫಾರಸುಗಳನ್ನು ಸಲ್ಲಿಸಲಿವೆ.
No comments:
Post a Comment