ಬೆಂಗಳೂರು: ರಾಜ್ಯದ ಆಡಳಿತ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಸುದೀರ್ಘ ಕಾಲದಿಂದ ಬಾಕಿ ಉಳಿದಿದ್ದ ತಹಶೀಲ್ದಾರ್ ಗ್ರೇಡ್-2 ವೃಂದದ ಒಟ್ಟು 232 ಅಧಿಕಾರಿಗಳಿಗೆ ತಹಶೀಲ್ದಾರ್ ಗ್ರೇಡ್-1 ವೃಂದಕ್ಕೆ ಮುಂಬಡ್ತಿ (ಪ್ರಮೋಷನ್) ನೀಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಸರ್ಕಾರದ ಅಧೀನ ಕಾರ್ಯದರ್ಶಿ (ಕಂದಾಯ ಇಲಾಖೆ)ಯಾದ ನರಸಿಂಹಮೂರ್ತಿ ಜಿ.ಕೆ. ಅವರು ಜೂನ್ 17, 2026 ರಂದು ಈ ಅಧಿಕೃತ ಆದೇಶವನ್ನು (ಸಂಖ್ಯೆ: ಇ-ಆರ್‌ಡಿ 279 ಎಂಎಸ್‌ಡಿ 2026) ಪ್ರಕಟಿಸಿದ್ದಾರೆ.
ಐದು ವರ್ಷಗಳ ಕಾಯುವಿಕೆಗೆ ಸಿಕ್ಕ ನ್ಯಾಯಸಮ್ಮತ ಫಲ
ಕಳೆದ 2021ರಿಂದಲೂ ತಹಶೀಲ್ದಾರ್ ಗ್ರೇಡ್-2 ವೃಂದದ ಅಧಿಕಾರಿಗಳಿಗೆ ಮುಂಬಡ್ತಿ ನೀಡುವ ಪ್ರಕ್ರಿಯೆಯಲ್ಲಿ ಸರಣಿ ವಿಳಂಬ ಉಂಟಾಗಿತ್ತು. ಇದರಿಂದ ಅಧಿಕಾರಿ ವಲಯದಲ್ಲಿ ತೀವ್ರ ನಿರಾಶೆ ಮೂಡಿತ್ತು. ಆದರೆ, ಪ್ರಸ್ತುತ ಸರ್ಕಾರವು ಜೇಷ್ಠತೆಯನ್ನು (Seniority) ಮುಖ್ಯ ಆಧಾರವಾಗಿಟ್ಟುಕೊಂಡು, ಕಾನೂನುಬದ್ಧವಾಗಿ ಏಕಕಾಲದಲ್ಲಿ 232 ಅಧಿಕಾರಿಗಳಿಗೆ ತಹಶೀಲ್ದಾರ್ ಗ್ರೇಡ್-1 ವೃಂದಕ್ಕೆ ಮುಂಬಡ್ತಿ ನೀಡುವ ಮೂಲಕ ಅವರ ದೀರ್ಘಕಾಲದ ನಿರೀಕ್ಷೆಗೆ ಸ್ಪಂದಿಸಿದೆ.
ಪ್ರಮುಖ ಭಾಗಗಳು ಮತ್ತು ವೇತನ ಶ್ರೇಣಿಯ ವಿವರಗಳು:
ಅಧಿಕೃತ ಆದೇಶದ ಪ್ರಕಾರ ಮುಂಬಡ್ತಿ ಪ್ರಕ್ರಿಯೆಯನ್ನು ಮೂರು ಪ್ರಮುಖ ಭಾಗಗಳಾಗಿ ವಿಂಗಡಿಸಲಾಗಿದೆ:
ಭಾಗ-1 (ಪೂರ್ವನ್ವಯ ಮುಂಬಡ್ತಿ): ಇಲಾಖಾ ವಿಚಾರಣೆ ಪ್ರಕರಣಗಳಲ್ಲಿ ಸಂಪೂರ್ಣ ದೋಷಮುಕ್ತರಾದ ಅಧಿಕಾರಿಗಳಿಗೆ, ಅವರಿಗಿಂತ ಕಿರಿಯ ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾದ ದಿನಾಂಕ 05.07.2021 ರಿಂದಲೇ ಜಾರಿಗೆ ಬರುವಂತೆ (ಪೂರ್ವನ್ವಯವಾಗಿ) ಕರ್ನಾಟಕ ನಾಗರಿಕ ಸೇವಾ ನಿಯಮಗಳು 1958ರ ನಿಯಮ 42ಬಿ ರಡಿಯಲ್ಲಿಸ್ಥಾನಪನ್ನ ಮುಂಬಡ್ತಿ ನೀಡಲಾಗಿದೆ. ಈ ವೃಂದದ ಅಧಿಕಾರಿಗಳ ವೇತನ ಶ್ರೇಣಿ ರೂ. 52,650 - 97,100 ಆಗಿದೆ.
ಯಾರೆಲ್ಲ ಇದ್ದಾರೆ?: ಸಿ ಕೆ ನಾಯ್ಕ (ಬ್ಯಾಡಗಿ), ಬಿ. ಗಿರಿಜಾ (ಚಾಮರಾಜನಗರ), ಮತ್ತು ವೈ. ಎಂ. ರೇಣುಕುಮಾರ್ (ಹೊಳೇನರಸೀಪುರ) ಮುಂತಾದ ಅಧಿಕಾರಿಗಳನ್ನು ಅವರು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗಳಲ್ಲೇ ಮುಂದುವರೆಸಲಾಗಿದೆ.
ಭಾಗ-2 ಮತ್ತು 3 (ತಕ್ಷಣದಿಂದ ಜಾರಿ): ದಿನಾಂಕ 02.06.2026 ರಂದು ಪ್ರಕಟಿಸಲಾದ ಅಂತಿಮ ಜೇಷ್ಠತಾ ಪಟ್ಟಿಯನ್ನಾಧರಿಸಿ ಈ ಮುಂಬಡ್ತಿ ನೀಡಲಾಗಿದ್ದು, ಭಾಗ-3ರ ಅಡಿಯಲ್ಲಿ ಬರುವ ಅಧಿಕಾರಿಗಳಿಗೆ ರೂ. 83,700 - 1,55,200 ರ ಭರ್ಜರಿ ವೇತನ ಶ್ರೇಣಿ ನಿಗದಿಯಾಗಿದೆ.
ಪ್ರಮುಖ ಅಧಿಕಾರಿಗಳು: ಟಿ.ಬಿ. ಹೊಸೂರ (ಶಿವಮೊಗ್ಗ ಮಹಾನಗರ ಪಾಲಿಕೆ), ಎಲ್ ಎಸ್ ರಮೇಶ್ (ಹಾಸನ ಡಿಸಿ ಕಚೇರಿ), ಅಶೋಕ ಎಸ್. ಯು. (ಕೆ.ಆರ್. ಪೇಟೆ), ಮಂಜುಳ ಕೆ. ನಾಯಕ್ (ಬೆಳಗಾವಿ ಚುನಾವಣಾ ತಹಶೀಲ್ದಾರ್), ಪ್ರಕಾಶ್ ಎಂ. ನಾಶಿ (ಯಲಬುರ್ಗಾ) ಸೇರಿದಂತೆ ಹಲವು ಅಧಿಕಾರಿಗಳನ್ನು ಸದ್ಯದ ಹುದ್ದೆಗಳಲ್ಲೇ ಮುಂದುವರೆಸಿ ಆದೇಶಿಸಲಾಗಿದೆ. ಇನ್ನು ಪಿ.ಬಿ. ಹೊಳೇಪ್ಪಗೋಳ ಸೇರಿದಂತೆ ಕೆಲವು ಅಧಿಕಾರಿಗಳು ಸ್ಥಳ ನಿರೀಕ್ಷೆಯಲ್ಲಿದ್ದಾರೆ.
ಅಧಿಕಾರಿಗಳಿಗೆ ಕಡ್ಡಾಯ ಶರತ್ತುಗಳು:
ಸರ್ಕಾರವು ಮುಂಬಡ್ತಿ ನೀಡುವ ಜೊತೆಗೆ ಕೆಲವು ಕಟ್ಟುನಿಟ್ಟಿನ ಆಡಳಿತಾತ್ಮಕ ಶರತ್ತುಗಳನ್ನು ವಿಧಿಸಿದೆ:
ಈಗಾಗಲೇ ಗ್ರೇಡ್-1 ಹುದ್ದೆಗಳಲ್ಲಿ ಪ್ರಭಾರ ಅಥವಾ ಕರ್ತವ್ಯದಲ್ಲಿರುವ ಅಧಿಕಾರಿಗಳು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಅದೇ ಹುದ್ದೆಗಳಲ್ಲಿ ಮುಂದುವರೆಯಲಿದ್ದಾರೆ.
ಇನ್ನೂ ಗ್ರೇಡ್-2 ಹುದ್ದೆಗಳಲ್ಲೇ ಮುಂದುವರಿದಿರುವ ಅಧಿಕಾರಿಗಳು, ಆಡಳಿತಾತ್ಮಕ ಹಿತದೃಷ್ಟಿಯಿಂದ ಮುಂದಿನ ಆದೇಶ ಬರುವವರೆಗೂ ತಹಶೀಲ್ದಾರ್ ಗ್ರೇಡ್-2 ಹುದ್ದೆಯ ಕರ್ತವ್ಯಗಳನ್ನೇ ನಿರ್ವಹಿಸಬೇಕಾಗುತ್ತದೆ.
ಮುಂಬಡ್ತಿ ಪಡೆದ ಎಲ್ಲಾ ಅಧಿಕಾರಿಗಳು ತಮ್ಮ ಹೊಸ ಹುದ್ದೆಗೆ ವರದಿ ಮಾಡಿಕೊಂಡ ನಂತರ, ತಮ್ಮ CTC ಪ್ರತಿಯನ್ನು ಕಡ್ಡಾಯವಾಗಿ ಸರ್ಕಾರದ ಅಧಿಕೃತ ಇ-ಮೇಲ್ ಐಡಿ: soservices3rd@gmail.com ಗೆ ಕಳುಹಿಸಿಕೊಡಲು ಸೂಚಿಸಲಾಗಿದೆ.
"ಮುಂಬಡ್ತಿ ಪಡೆದ ಎಲ್ಲಾ ಅಧಿಕಾರಿಗಳಿಗೆ ಹಾರ್ದಿಕ ಅಭಿನಂದನೆಗಳು. ತಮ್ಮ ಸುದೀರ್ಘ ಅನುಭವ, ಕಾರ್ಯನಿಷ್ಠೆ ಹಾಗೂ ಜನಸೇವೆಯ ಬದ್ಧತೆಯನ್ನು ಇನ್ನಷ್ಟು ಉನ್ನತ ಮಟ್ಟದಲ್ಲಿ ಪ್ರದರ್ಶಿಸಿ, ರಾಜ್ಯದ ಆಡಳಿತ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಲಪಡಿಸುವುದರೊಂದಿಗೆ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ನೀಡಲಿ." — ಸರ್ಕಾರದ ಆಶಯ
ಈ ಬೃಹತ್ ಮುಂಬಡ್ತಿ ಪ್ರಕ್ರಿಯೆಯಿಂದಾಗಿ ರಾಜ್ಯದ ಕಂದಾಯ ಇಲಾಖೆ ಹಾಗೂ ತಾಲೂಕು ಮಟ್ಟದ ಆಡಳಿತ ವ್ಯವಸ್ಥೆಗೆ ಹೊಸ ಚೈತನ್ಯ ಸಿಕ್ಕಂತಾಗಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳು ಇನ್ನು ಮುಂದೆ ಮತ್ತಷ್ಟು ವೇಗವಾಗಿ ನಡೆಯಲಿವೆ.

No comments:
Post a Comment